ಸಿದ್ಧಾಂತಿ ಶಿವಶಂಕರಶಾಸ್ತ್ರಿ
	1864-1942. ಕನ್ನಡ ವಿದ್ವಾಂಸರು. ಇವರದು ಪಂಡಿತ ಮನೆತನ. ತಂದೆ ಸುಬ್ರಹ್ಮಣ್ಯ ಶಾಸ್ತ್ರೀಗಳು ಸಂಸ್ಕøತದಲ್ಲಿ ಹೆಸರಾಂತ ವಿದ್ವಾಂಸರಾಗಿದ್ದರು. ವ್ಯಾಸಂಗವನ್ನು ತಂದೆಯವರ ಬಳಿ ನಡೆಸಿದ ಇವರು ಸಂಸ್ಕøತದ ಜೊತೆಗೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯವನ್ನು ಗಳಿಸಿಕೊಂಡು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ನೇಮಕಗೊಂಡರು. ಕ್ರಿಶ್ಚಿಯನ್ ಕಾಲೇಜು ಮತ್ತು ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ಸು. 30 ವರ್ಷಗಳ ಕಾಲ ಕನ್ನಡ ಪಂಡಿತರಾಗಿ ಸೇವೆಸಲ್ಲಿಸಿದ ಇವರು 1921ರಲ್ಲಿ ಸೇವೆಯಿಂದ ನಿವೃತ್ತರಾಗಿ ಬೆಂಗಳೂರಿಗೆ ಬಂದು, ಬಸವನಗುಡಿಯ ಆನಂದಗಿರಿ ದೇವಾಲಯದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರು.

	ಇವರಿಗೆ ಭಾಷಾಪಾಂಡಿತ್ಯದ ಜೊತೆಗೆ ಜ್ಯೋತಿಶ್ಶಾಸ್ತ್ರದಲ್ಲೂ ಪ್ರವೇಶವಿತ್ತು. ಇವರು ರಚಿಸಿರುವ ಕರ್ನಾಟಕ ನಳೋಪಾಖ್ಯಾನ ಸಹೃದಯರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿನವಕಾದಂಬರಿ, ಕರ್ನಾಟಕ ನರಕಾಸುರವಿಜಯ ವ್ಯಾಯೋಗಂ, ಶ್ರೀಶಂಕರ ಕಥಾಮೃತಂ, ಪ್ರಶ್ನೋತ್ತರ ಮಾಲಿಕೆ, ಶ್ರೀಕಾವೇರಿ ಮಾಹಾತ್ಮ್ಯವು - ಇವು ಇತರ ಗ್ರಂಥಗಳು. 

	ಇವರು ಸಲ್ಲಿಸಿದ ಭಾಷಾಸೇವೆಗೆ ಹಲವು ಬಗೆಯ ಗೌರವಗಳು ಲಭಿಸಿವೆ. ಶೃಂಗೇರಿ ಮಠದಿಂದ ಸನ್ಮಾನಿತರಾದ ಇವರಿಗೆ ಭಾರತ ಸರ್ಕಾರದಿಂದ ಮಹಾಮಹೋಪಾಧ್ಯಾಯ ಎಂಬ ಪ್ರಶಸ್ತಿಯೂ 1938ರಲ್ಲಿ ಮೈಸೂರು ಮಹಾರಾಜರಿಂದ ವಿದ್ಯಾನಿಧಿ ಎಂಬ ಪ್ರಶಸ್ತಿಯೂ ದೊರಕಿತು. 1923ರಲ್ಲಿ ಬಿಜಾಪುರದಲ್ಲಿ ನಡೆದ 9ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ಕನ್ನಡಿಗರು ಇವರನ್ನು ಗೌರವಿಸಿದರು.									
	(ಎಚ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ